ದಯವಿಟ್ಟು ತಮ್ಮ ಪ್ರತಿಕ್ರಿಯೆಗಳನ್ನು ಈ ಕೆಳಗಿನ ಇಮೇಲ್ ವಿಳಾಸಕ್ಕೆ ನುಡಿ ಯುನಿಕೋಡ್ ತಂತ್ರಾಂಶದಲ್ಲಿ ಕಳುಹಿಸಿ. ವಾಟ್ಸಪ್ ಮೂಲಕವೂ ಪ್ರತಿಕ್ರಿಯೆ ಕಳುಹಿಸಬಹುದು. ಅನಿವಾರ್ಯವಾದರೆ ಇಂಗ್ಲಿಷಿನಲ್ಲಿಯೂ ಪ್ರತಿಕ್ರಿಯೆ ನೀಡಬಹುದು.
Email: chinthanabayalu@gmail.com
ವಾಟ್ಸಪ್ ಸಂಖ್ಯೆ: 8217703698
ಪ್ರತಿಕ್ರಿಯೆಗಳು
ಕೆಲವು ಅನಿಸಿಕೆಗಳು
‘ಚಿಂತನ ಬಯಲು’ ತ್ರೈಮಾಸಿಕದ ಗರ್ಭದೊಳಗೆ ಹೊಕ್ಕಾಗ ಅನನ್ಯವಾದ ವಿದ್ವತ್ಲೋಕದ ಅನಾವರಣವಾಗುತ್ತದೆ. ವೈವಿಧ್ಯಮಯ ಲೇಖನಗಳು ಓದುಗನನ್ನು ಯೋಚಿಸಲು ತೊಡಗಿಸುತ್ತವೆ. ಕೃತಿಗಳ ವಸ್ತುನಿಷ್ಠ ವಿಮರ್ಶೆ, ಚಿಕಿತ್ಸಕ ದೃಷ್ಟಿಯ ಚಿಂತನೆ, ಮೌಲ್ಯಮಾಪನೆ, ಹಾಗೂ ವಿಶ್ಲೇಷಣಾತ್ಮಕ ಬರವಣಿಗೆಗಳು ಓದುಗನನ್ನು ಅನ್ಯಲೋಕಕ್ಕೆ ಕರೆದುಕೊಂಡು ಹೋಗುತ್ತವೆ. ಈ ತ್ರೈಮಾಸಿಕದ ಲೇಖಕರ ಬಳಗದಲ್ಲಿ ಡಾಕ್ಟರೇಟ ಪದವಿ ಹೊಂದಿದ ಲೇಖಕರಂತೆ, ಸ್ನಾತಕೋತ್ತರ ವಿಭಾಗದಲ್ಲಿರುವ ವಿದ್ಯಾರ್ಥಿಗಳೂ ಇದ್ದಾರೆ. ಪ್ರತಿಯೊಂದು ಲೇಖನದ ಕೊನೆಗೆ ಅಡಿಟಿಪ್ಪಣಿಗಳು, ಪರಾಮರ್ಶನ ( ಆಕರ )ಗ್ರಂಥಗಳ ವಿವರಗಳೂ ಇವೆ. ಇದರಿಂದ ಲೇಖಕರು ಪಟ್ಟ ಶ್ರಮದ ಅರಿವಾಗುತ್ತದೆ. ಸಾಹಿತ್ಯದ ಪ್ರಕಾರಗಳಾದ ಕಾವ್ಯ, ಕಾದಂಬರಿ ನಾಟಕ, ಜಾನಪದ ಈ ಎಲ್ಲ ಕ್ಷೇತ್ರಗಳ ಕುರಿತು ಸಂಕ್ಷಿಪ್ತ ಆದರೆ ಸ್ಫುಟವಾದ ಲೇಖನಗಳನ್ನು ನಾವು ಕಾಣಬಹುದು. ಹಳೆಗನ್ನಡ, ನಡುಗನ್ನಡವಲ್ಲದೆ, ನವೋದಯ, ನವ್ಯ ಮತ್ತು ಪ್ರಗಶೀಲ ಸಾಹಿತ್ಯಗಳ ಬಗ್ಗೆಯೂ ಆಗಾಗ ಪಾಂಡಿತ್ಯಪೂರ್ಣ ಬರಹಗಳು ಇಲ್ಲಿ ಕಂಡು ಬರುತ್ತವೆ. ಅಕ್ಯಾಡಿಮಿಕ್ ಕಡೆಗೆ ಪತ್ರಿಕೆ ಒಲೆಯುತ್ತಿದೆ ಎಂಬ ಸಂಶಯವೂ ಬರುತ್ತದೆ. ಶಾಸ್ತ್ರೀಯ ಸಂಗೀತ, ನಾಟಕ ಮತ್ತು ಪ್ರದರ್ಶನೀಯ ಕಲೆಗಳ ಬರಹಗಳಿಗೆ ಸಂಪಾದಕರು ಪತ್ರಿಕೆಯಲ್ಲಿ ಇಂಬು ಮಾಡಿಕೊಡಬೇಕು. ಪತ್ರಿಕೆ ಉತ್ತರೋತ್ತರ ಅಭಿವೃದ್ಧಿ ಆಗಲಿ, ಇಷ್ಟೇ ನನ್ನ ಹಾರೈಕೆ.
ಪ್ರಕಾಶ ಪರ್ವತೀಕರ, ತಿರುಪುರ, ತಮಿಳುನಾಡು
ಪತ್ರಿಕೆ ಪ್ರಾರಂಭವಾದಾಗಿನಿಂದ ಚಂದಾದಾರ ನಾನು. ಎಲ್ಲಾ ಸಂಚಿಕೆಗಳನ್ನೂ ಬುಕ್ ಬಯಂಡ್ ಮಾಡಿಸಿ ಇಟ್ಡುಕೊಂಡಿದ್ದೇನೆ. ಓದುವುದು ಕೆಲವೊಮ್ಮೆ ತಿಂಗಳುಗಳೇ ಕಳೆದಿರುತ್ತದೆ. ಆದರೆ ತುಂಬಾ ಗಂಭೀರ ವಿಚಾರಗಳನ್ನು ಒಳಗೊಂಡಿರುವ ಪತ್ರಿಕೆ “ಚಿಂತನ ಬಯಲು”. ಎಷ್ಟೋ ವಿಚಾರಗಳು ನನ್ನರಿವಿಗೆ ಮೀರಿದ್ದು. ಆದರೆ ಮುಂದೆ ಯಾವತ್ತಾದರೂ ರೆಫರೆನ್ಸಿಗೆ ಒದಗಬಹುದಾದ ಲೇಖನಗಳಿರುತ್ತವೆ. ಪ್ರಾಮಾಣಿಕ, ಗಂಭೀರ ಪತ್ರಿಕೆ. ಹಲವಾರು ವರ್ಷಗಳಿಂದ ನಿಲ್ಲಿಸದೇ ಪತ್ರಿಕೆಯನ್ನು ಹೊರತರುತ್ತಿರುವ ಸಂಪಾದಕ ಮಂಡಳಿಗೆ ಅಭಿನಂದನೆಗಳು.
….ಮೂರ್ತಿ ದೇರಾಜೆ, ರಂಗ ನಿರ್ದೇಶಕರು
ಕನ್ನಡದಲ್ಲಿ ಸಮಾಜವಿಜ್ಞಾನ ಮತ್ತು ಮಾನವಿಕ ವಿಷಯಗಳ ಸಂಶೋಧನೆಗೆ ಚಿಂತನ ಬಯಲು ತ್ರೈಮಾಸಿಕದ ಪ್ರೋತ್ಸಾಹ ಮತ್ತು ಕೊಡುಗೆ ಅಪಾರ. ಇಂದು ತಮ್ಮದೇ ಪಂಥೀಯ ವಿಚಾರಗಳ ಸಮರ್ಥನೆಗಳನ್ನೇ ಸಂಶೋಧನೆ ಮತ್ತು ಚರ್ಚೆ ಎಂದು ಭಾವಿಸಲಾಗಿದೆ. ಸ್ಥಾಪಿತ ಹಿತಾಸಕ್ತಿಗಳ ನಡುವೆ ಅವುಗಳನ್ನು ಪ್ರಶ್ನಿಸಿ ನವೀನ ವಿಚಾರಗಳನ್ನು ಸಂಶೋಧನೆ ಮಾಡುವುದು ಮತ್ತು ಆ ಸಂಶೋಧನಾ ಬರಹಗಳಿಗೆ ಒಂದು ಜರ್ನಲ್ನಲಿ ಅವಕಾಶ ಕೊಟ್ಟು ಪ್ರೋತ್ಸಾಹಿಸುವುದು ಸುಲಭದ ಕೆಲಸವಲ್ಲ. ಈ ಕೆಲಸವನ್ನು ಸವಾಲಾಗಿ ಸ್ವೀಕರಿಸಿರುವ ಪತ್ರಿಕೆಯು ನಿರಂತರವಾಗಿ ನವೀನ ವಿಚಾರಗಳನ್ನು ಸಂಶೋಧನಾಸಕ್ತರ ಮುಂದೆ ಚರ್ಚೆಗೆ ಇಡುತ್ತಲೇ ಬರುತ್ತಿದೆ.
ಪಿಹೆಚ್. ಡಿ. ಪ್ರಬಂಧ ಮಂಡನೆಗೆ ಮತ್ತು ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಅಧ್ಯಾಪಕರ ಪದೋನ್ನತಿಗೆ ಸಂಶೋಧನ ಲೇಖನಗಳ ಪ್ರಕಟಣೆ ಕಡ್ಡಾಯಗೊಳಿಸಿದ ಮೇಲೆ ‘ಸಂಶೋಧನ ಲೇಖನ’ ಮತ್ತು ‘ಸಂಶೋಧನ ಜರ್ನಲ್’ ಎನ್ನುವ ಶಬ್ದಗಳೇ ವಿರೂಪಗೊಳ್ಳುವ ಮಟ್ಟಕ್ಕೆ ಅವುಗಳು ವ್ಯಾಪರೀಕರಣಗೊಂಡು ಭ್ರಷ್ಟಗೊಂಡಿವೆ. ಈ ಭ್ರಷ್ಟಕೂಪ ಮತ್ತು ತಥಾಕಥಿತ ಪಂಥೀಯವಾದಿಗಳ ಸವಾಲುಗಳನ್ನು ಮೆಟ್ಟಿ ಗುಣಮಟ್ಟದ ಸಂಶೋಧನ ಲೇಖನಗಳನ್ನೇ ಆಯ್ದು ಪ್ರಕಟಿಸುತ್ತ ಪತ್ರಿಕೆಯನ್ನು ಹೊರತರುತ್ತಿರುವ ಚಿಂತನ ಬಯಲು ಬಳಗಕ್ಕೆ ಅಭಿನಂದನೆಗಳು. ಚಿಂತನಬಯಲಿನ ಜಾಲತಾಣವು ಈ ಪತ್ರಿಕೆಯಲ್ಲಿನ ಚರ್ಚೆಗಳ ಮತ್ತು ಓದುಗರ ವ್ಯಾಪ್ತಿಯನ್ನು ವಿಸ್ತರಿಸಲಿ ಎನ್ನುವ ಸದಾಶಯದೊಂದಿಗೆ ಶುಭಾಶಯಗಳನ್ನು ಕೋರುತ್ತಿದ್ದೇನೆ.
- ಪ್ರೊ. ಎ. ಷಣ್ಮುಖ, ಪ್ರಾಧ್ಯಾಪಕರು, ಸ್ನಾತಕ್ಕೋತ್ತರ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ.
ಹೆಸರಿಗೆ ಅನ್ವರ್ಥವಾಗಿ ಸಂಶೋಧನಾರ್ಥಿಗಳಿಗೆ, ಚಿಂತನಾಶೀಲರಿಗೆ ಉತ್ತಮ ವೇದಿಕೆಯಾಗಿ ಸದುಪಯೋಗಗೊಳ್ಳುತ್ತಿರುವ, ಸದ್ದಿಲ್ಲದೇ ಸುದ್ದಿ ಮಾಡುತ್ತಿರುವ ಪತ್ರಿಕೆಗಳ ಸಾಲಿನಲ್ಲಿ ಮೇರು ಸ್ಥಾನದ ಪತ್ರಿಕೆ ‘ಚಿಂತನ ಬಯಲು’ ಎಂದರೆ ಅತಿಶಯೋಕ್ತಿಯಲ್ಲ.
- ಡಾ. ಚಂದ್ರಹಾಸ ಜಿ, ಪ್ರಾಂಶುಪಾಲರು, ಅಮೃತ ಕಾಲೇಜು, ಮಂಗಳೂರು
ಸರಿಹೊತ್ತಿನ ಆಧುನಿಕತೆಯ ಭರಾಟೆಯಲ್ಲಿ, ವಿಜ್ಞಾನ ತಂತ್ರಜ್ಞಾನದ ಮಿತಿಮೀರಿದ ಆಕರ್ಷಣೆಯಲ್ಲಿ ಕನ್ನಡ ಭಾಷೆ, ಸಾಹಿತ್ಯವನ್ನು ಕುರಿತಾದ ಚಿಂತನವನ್ನು ಬಯಲು ಮಾಡುವ ಶುದ್ಧ ಸಾಹಿತ್ಯದ ವೇದಿಕೆಯಾಗಿ ‘ಚಿಂತನ ಬಯಲು’ ತಾನು ಹೊಂದಿರುವ ಹೊಣೆಗಾರಿಕೆಯನ್ನು ಹಾಗೂ ಮಾಡಬೇಕಾದ ಕಾರ್ಯವನ್ನು ಬಹು ಅಚ್ಚುಕಟ್ಟಾಗಿ ಅಂತರಶಿಸ್ತೀಯ ನೆಲೆಯಲ್ಲಿ ಸಮರ್ಥವಾಗಿ ಮಾಡುತ್ತಿದೆ. ಇದು ಇದರ ಅಗ್ಗಳಿಕೆ ಮತ್ತು ಹೆಗ್ಗಳಿಕೆ.
ಅಭಿಜಾತ ಮತ್ತು ಆಧುನಿಕ ಎನಿಸಿದ ಸರಿಹೊತ್ತಿನ ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಯಲ್ಲಿ ‘ಚಿಂತನ ಬಯಲು’ ಚಾರಿತ್ರಿಕವಾದ ಮೈಲಿಗಲ್ಲಾಗಿ ಕಾಣುವುದು ಅದರ ಒಟ್ಟೂ ಅಸ್ತಿತ್ವವನ್ನು ಸೂಕ್ಷ್ಮವಾಗಿ ಗಮನಿಸಿದಾಗ! ಇದು ಶುದ್ಧಾತಿಶುದ್ಧ ಕ್ಲಾಸಿಕಲ್ ದೃಷ್ಟಿಕೋನವುಳ್ಳ ತ್ರೈಮಾಸಿಕ ಪತ್ರಿಕೆ.
ಕನ್ನಡ ಭಾಷೆ ಮತ್ತು ಸಾಹಿತ್ಯ ಅಧ್ಯಯನದ ಉಳಿವು ಮತ್ತು ಬೆಳವಣಿಗೆಯ ದೃಷ್ಟಿಯಿಂದ ಅವಲೋಕಿಸಿದರೆ ‘ಚಿಂತನ ಬಯಲು’ ವಿಶಿಷ್ಟವಾದ ಸ್ಥಾನವನ್ನು ಪಡೆಯುತ್ತದೆ. ಇಂಥ ಪ್ರಯೋಗಗಳು ಈ ಹಿಂದೆ ಸಾಕಷ್ಟು ನಡೆದಿವೆಯಾದರೂ ‘ಚಿಂತನ ಬಯಲು’ ತನ್ನ ಮಾರ್ಗದಲ್ಲಿ ಹತ್ತರ ಜೊತೆ ಹನ್ನೊಂದಾಗದೇ ಪ್ರತ್ಯೇಕವಾದ ಅಸ್ಮಿತೆಯನ್ನು ಉಳಿಸಿಕೊಂಡಿದೆ ಮತ್ತು ಗಳಿಸಿಕೊಂಡಿದೆ ಎಂದರೆ ಉತ್ಪ್ರೇಕ್ಷೆಯಲ್ಲ!
– ಟಿ.ದೇವಿದಾಸ್, ಲೇಖಕರು ಹಾಗೂ ಅಂಕಣಕಾರರು